ಕನ್ಹೇರಿ : ಮುಂಬಯಿಯ ಹತ್ತಿರವಿರುವ ಒಂದು ಸ್ಥಳ. ಬಂಡೆಗಲ್ಲಿನಲ್ಲಿ ಕೊರೆದ ಎಪ್ಪತ್ತಕ್ಕೂ ಮೇಲ್ಪಟ್ಟು ಬೌದ್ಧ ಗುಹಾಂತರ್ದೇವಾಲಯಗಳೂ ವಿಹಾರಗಳೂ ಇಲ್ಲಿ ಇವೆ. ಸು. 180ರಲ್ಲಿ ಕೊರೆಯಲಾದ, ಹೀನಯಾನ ಪಂಥಕ್ಕೆ ಸಂಬಂಧಿಸಿದ ಚೈತ್ಯ ಗುಹಾಂತರ್ದೇವಾಲಯ ಇವುಗಳಲ್ಲಿ ಮಹತ್ತ್ವದ್ದು. ಇದರ ಸುತ್ತಮುತ್ತಲಿನ ಪ್ರದೇಶ ಗಿಡಮರಗಳಿಂದಲೂ ಜುಳುಜುಳು ಹರಿಯುವ ಝರಿಗಳಿಂದಲೂ ಕೂಡಿ ರಮ್ಯವಾಗಿದೆ. ಈ ಚೈತ್ಯ ಕರ್ಲಾ ಚೈತ್ಯಾಲಯದ ಹೀನ ಅನುಕರಣೆ. ಅದರ 2/3 ರಷ್ಟು ಮಾತ್ರ ಇದು ವಿಸ್ತಾರವಾಗಿದೆ. ಇದನ್ನು ಅಪುರ್ಣವಾಗಿ ಕೆತ್ತಲಾಗಿದ್ದು; 5ನೆಯ ಶತಮಾನದ ವರೆಗೆ ಇದು ಹೀನಯಾನ ಪಂಥೀಯರ ಪ್ರಾರ್ಥನಾಮಂದಿರವಾಗಿತ್ತು. ಮಹಾಯಾನ ಪಂಥದವರು ಬೌದ್ಧ ಧರ್ಮವನ್ನು ಪುರುಜ್ಜೀವನಗೊಳಿಸುವ ಕಾಲಕ್ಕೆ ಇದರ ಹೊರಭಾಗದಲ್ಲಿ ಕೆಲವು ಸುಂದರ ದೇವತಾವಿಗ್ರಹಗಳನ್ನು ನಿರ್ಮಿಸಿದರು.

ಈ ಚೈತ್ಯಮಂಟಪವನ್ನು ಪ್ರವೇಶಿಸಲು ಮೂರು ದ್ವಾರಗಳಿವೆ. ಹಿಂಭಾಗದಲ್ಲಿ ಇದು ಅರ್ಧವರ್ತುಳಾಕಾರವಾಗಿದೆ. ಇದರ ಉದ್ದ 86', ಅಗಲ 40' ಮತ್ತು ಎತ್ತರ 59'. ಮಧ್ಯ ಅಂಕಣವನ್ನು; 38 ಕಂಬಗಳು ಬೇರ್ಪಡಿಸುತ್ತವೆ. ಇವು ಕೆಲಮಟ್ಟಿಗೆ ಕಾರ್ಲ ಚೈತ್ಯದ ಕಂಬಗಳನ್ನು ಹೋಲುತ್ತವೆ.
ಈ ಗುಹಾಂತರ್ದೇವಾಲಯದ ಮುಂದಿನ ಅಂಗಳದಲ್ಲಿ ಕಾರ್ಲಾ ಚೈತ್ಯದಲ್ಲಿರುವಂತೆ ಎರಡು ಸಿಂಹಸ್ತಂಭಗಳಿವೆ. ಅವು ಇಲ್ಲಿ ಕಲ್ಲಿಗೆ ಹೊಂದಿಕೊಂಡಿವೆ; ಪ್ರತ್ಯೇಕವಾಗಿ ನಿಂತಿಲ್ಲ.
(ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ